.ಮ್ಯಾಂಚೆಸ್ಟರ್	
ಇಂಗ್ಲೆಂಡಿನ ನಾಲ್ಕು ಮಹಾನಗರಗಳ ಪೈಕಿ ಒಂದು. ಪ್ರಸಿದ್ಧ ಕೈಗಾರಿಕಾ ಕೇಂದ್ರ. ಲ್ಯಾಂಕಷೈರ್ ಕೌಂಟಿಗೆ ಸೇರಿದೆ. ಲಂಡನ್ ನಗರದ ವಾಯುವ್ಯಕ್ಕೆ 298 ಕಿಮೀ. ಲಿವರ್‍ಪೂಲ್ ನಗರದ ಪೂರ್ವಕ್ಕೆ 50 ಕಿಮೀ ದೂರದಲ್ಲಿರುವ ಈ ನಗರದ ಬಲಿ ಇರ್ವೆಲ್, ಈರ್ಕ್ ಮತ್ತು ಮೆಡ್ಲಾಕ್ ನದಿಗಳು ಕೂಡುತ್ತವೆ. ನಗರ ಉತ್ತರ ಅಕ್ಷಾಂಶ 50030' ಪಶ್ಚಿಮ ರೇಖಾಂಶ 2015' ನಲ್ಲಿದೆ. ಜನಸಂಖ್ಯೆ 4,326,000(1995).

	ಇಂಗ್ಲೆಂಡಿನ ದೊರೆ ಒಂದನೆಯ ವಿಲಿಯಮ್‍ನ ಕಾಲದಲ್ಲಿ ಪ್ರಕಟಗೊಂಡ ಡೂಮ್ಸ್‍ಡೇಬುಕ್‍ನಲ್ಲಿ (1086) ಮ್ಯಾಂಚೆಸ್ಟರ್ ಗ್ರಾಮ ಕುರಿಸಾಕಣೆ ಮತ್ತು ತುಪ್ಪಟ ಕೈಗಾರಿಕೆಗಳ ಸ್ಥಳವೆಂದು ದಾಖಲೆಯಾಗಿದೆ. ಈಗಿನ ನಗರ ನಿವೇಶನದಲ್ಲಿ ಹಿಂದೆ ಕೆಲ್ವಿಕ್ ಮತ್ತು ರೋಮನ್ನರು ನೆಲಸಿದ್ದರೆಂಬುದಕ್ಕೆ ಆಧಾರಗಳಿವೆ. ಟ್ಯೂಡರ್ ಅರಸರ ಕಾಲದಲ್ಲಿ ಪಟ್ಟಣ ದೊಡ್ಡ ವ್ಯಾಪಾರ ಸ್ಥಳವಾಗಿದ್ದು 19 ನೆಯ ಶತಮಾನದಲ್ಲಿ ಹತ್ತಿ ವ್ಯಾಪಾರ ಮತ್ತು ಕೈಗಾರಿಕೆಗಳ ಕೇಂದ್ರವಾಯಿತು. ಬಟ್ಟೆ, ರಬ್ಬರ್, ಕಾಗದ, ಯಂತ್ರೋಪಕರಣಗಳ ತಯಾರಿಕೆ, ತೈಲಶುದ್ಧೀಕರಣ ಮತ್ತು ರಾಸಾಯನಿಕ ವಸ್ತುಗಳ ಉತ್ಪನ್ನಗಳಿಗೆ ಮ್ಯಾಂಚೆಸ್ಟರ್ ಪ್ರಸಿದ್ಧವಾಗಿದೆ.

	ಇಲ್ಲಿ 15 ನೆಯ ಶತಮಾನದ ಕ್ರೈಸ್ತ ದೇವಾಲಯ, ಪುರಭವನ, ವಿಶ್ವವಿದ್ಯಾಲಯ, ಮಹಾ ಗ್ರಂಥಾಲಯ, ಕಲಾಪ್ರದರ್ಶನ ಶಾಲೆ ಹಾಗೂ ಹಳೆಯ ವಾಣಿಜ್ಯ ಭವನ ಮುಂತಾದವುಗಳಿವೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ನಷ್ಟಕ್ಕೊಳಗಾದ ಕಟ್ಟಡಗಳನ್ನು ದುರಸ್ತಿ ಮಾಡಲಾಗಿದೆ. ಹೀಟನ್ ಪಾರ್ಕ್ ಮುಂತಾದ ಸುಂದರ ಉದ್ಯಾನಗಳಿವೆ. ಮ್ಯಾಂಚೆಸ್ಟರ್ ಸಾಂಸ್ಕøತಿಕ ಚಟುವಟಿಕೆಗಳ ಕೇಂದ್ರವೆನಿಸಿದೆ.

	ಒಳನಾಡಿನಿಂದ ಸಮುದ್ರ ತೀರಕ್ಕೆ ಹಡಗುಗಳು ಸಂಚರಿಸಲು ಮ್ಯಾಂಚೆಸ್ಟರ್ ನಾಲೆಯ ನಿರ್ಮಾಣದಿಂದಾಗಿ (1894) ಈ ನಗರ ವ್ಯಾಪಾರ ವಾಣಿಜ್ಯದಲ್ಲಿ ಬೇಗನೆ ಉಚ್ಛ್ರಾಯ ಸ್ಥಿತಿಗೆ ಬಂತು. ಮ್ಯಾಂಚೆಸ್ಟರನಿಂದ ನೆರೆಹೊರೆಯ ನಗರಗಳಿಗೆ ರೈಲು, ರಸ್ತೆ, ಹಾಗೂ ವಿಮಾನ ಸಂಚಾರವಿದೆ. ನಗರದಲ್ಲಿ 4 ಮುಖ್ಯ ರೈಲು ನಿಲ್ದಾಣಗಳಿವೆ. 1830 ರಲ್ಲಿ ಮ್ಯಾಂಚೆಸ್ಟರ್-ಲಿವರ್‍ಪೂಲ್ ರೈಲುಮಾರ್ಗ ಪ್ರಾರಂಭವಾದದ್ದು ಪಟ್ಟಣದ ಇತಿಹಾಸದಲ್ಲಿ ಬಹಳ ಮುಖ್ಯ ಘಟನೆ. ರಿಂಗ್‍ವೇ ಬಳಿ ವಿಮಾನ ನಿಲ್ದಾಣ ಇದೆ. ಮ್ಯಾಂಚೆಸ್ಟರ್ ಗಾರ್ಡಿಯನ್ (1821) ಈ ನಗರದ ಪ್ರಸಿದ್ಧ ದೈನಂದಿನ ಪತ್ರಿಕೆ.
										    (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ